ಕೋಲ್‍ರಾಷ್, ಫ್ರೀಡರಿಚ್ ವಿಲ್‍ಹೆಲ್ಮ್
1840-1910. ಜರ್ಮನಿಯ ಭೌತವಿಜ್ಞಾನಿ.  ಜನನ ವೀಸರ್ ನದಿ ದಡದ ಮೇಲಿರುವ ರಿಂಟೆಲ್ನ್‍ನಲ್ಲಿ 1840ರ ಅಕ್ಟೋಬರ್ 14ರಂದು. ಈತನ ತಂದೆ ರುಡಾಲ್ಫ್ ಕೋಲ್‍ರಾಷ್ ಕೂಡ ಭೌತಶಾಸ್ತ್ರದಲ್ಲಿ ಅನೇಕ ಹೆಚ್ಚಿನ ಮಟ್ಟದ ಪ್ರಯೋಗಗಳನ್ನು ನಡೆಸಿದ್ದ.  ಕೋಲ್‍ರಾಷನ ವಿದ್ಯಾಭ್ಯಾಸ ಗಟಿಂಗನ್ ಮತ್ತು ಎರ್‍ಲಾಂಗೆನ್ ಪಟ್ಟಣಗಳಲ್ಲಿ ಆಯಿತು. ಅತ್ಯಂತ ಮೇಧಾವಿಯೆಂದು ಪರಿಗಣಿಸಲ್ಪಟ್ಟಿದ್ದರಿಂದ ಇವನಿಗೆ ತತ್‍ಕ್ಷಣವೇ ಗಟಿಂಗೆನ್‍ನಲ್ಲಿ ಪ್ರಾಧ್ಯಾಪಕನಾಗಲು ಅವಕಾಶ ದೊರಕಿತು. ಅನಂತರ ಫ್ರ್ಯಾಂಕ್‍ಫರ್ಟ್, ಡಾರ್ಮ್‍ಸ್ಟಾಟ್, ವುರ್ಸ್‍ಬರ್ಗ್, ಸ್ಟ್ರಾಸ್‍ಬರ್ಗ್ ಇಲ್ಲಿನ ಕಾಲೇಜುಗಳಲ್ಲಿ ಕೆಲಸ ಮಾಡಿ ಮುಂದೆ ಚಾರ್ಲ್‍ಟನ್‍ಬರ್ಗ್‍ನಲ್ಲಿನ ರೀಕನ್ ಸ್ಟಾಲ್ಟ್‍ನ ಅಧ್ಯಕ್ಷನಾಗಿ ಹೆಲ್ಮ್‍ಹೋಲ್ಟ್ಸ್‍ನ ಉತ್ತರಾಧಿಕಾರಿಯಾದ. ಈತನನ್ನು 1900ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಗೌರವಪ್ರಾಧ್ಯಾಪಕನನ್ನಾಗಿ ನೇಮಿಸಿದರು. ಲಂಡನ್ನಿನ ರಾಯಲ್ ಸೊಸೈಟಿ ಮತ್ತು ಫಿಸಿಕಲ್ ಸೊಸೈಟಿ, ಯೂರೋಪಿನ ಅನೇಕ ವೈಜಾÐನಿಕ ಸಂಘ-ಇವು ಈತನನ್ನು ತಮ್ಮ ಗೌರವ ಸದಸ್ಯನನ್ನಾಗಿ ಚುನಾಯಿಸಿದ್ದುವು.
ಕೋಲ್‍ರಾಷನ ಸಂಶೋಧನೆಗಳು ಮುಖ್ಯವಾಗಿ ವಿದ್ಯುತ್ ಮತ್ತು ಕಾಂತ ಭಾಗಗಳಲ್ಲಿ ಇದ್ದವು. ಭೂಮಿಯ ಕಾಂತದ ಕ್ಷಿತಿಜೀಯ ಘಟಕವನ್ನೂ ವಿದ್ಯುತ್ ಪ್ರವಾಹವನ್ನೂ ಏಕಕಾಲದಲ್ಲಿ ಅಳೆಯಲು ಒಂದು ವಿಧಾನವನ್ನು ರೂಪಿಸಿದ. ಎಲೆಕ್ಟ್ರೊಲೈಟಿನ ಧ್ರುವೀಕರಣವನ್ನು ಕಡಿಮೆ ಮಾಡಲು ಸೇತುವೆಯಲ್ಲಿ ಪರ್ಯಾಯ ವಿದ್ಯುತ್ತನ್ನು ಬಳಸಲು ಸಲಹೆ ಕೊಟ್ಟವನು ಈತನೇ. ಇದಕ್ಕೆ ಕೋಲ್‍ರಾಷ್ ಸೇತುವೆ ಎಂದೇ ಹೆಸರು. ಇಂದಿಗೂ ಕೂಡ ಈ ವಿಧಾನವನ್ನು ಬಳಸುತ್ತಾರೆ. ದ್ರಾವಣದ ಸಾರರಿಕ್ತತೆಗೂ ಅದರ ವಿದ್ಯುದ್ವಹನತೆಗೂ ಇರುವ ಸಂಬಂಧವನ್ನು ಪರಿಶೀಲಿಸಿ ಇದರಿಂದ ಅಯಾನುಗಳ ನಿರಪೇಕ್ಷವೇಗವನ್ನು ಕಂಡುಹಿಡಿದ.  ಕೋಲ್‍ರಾಷ್ ಕಾಲವಾದದ್ದು 1910 ನೆಯ ಇಸವಿ ಜನವರಿ 17ರಂದು.            			   (ಡಿ.ಎಸ್.ಎಂ.; ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ